ಕಾಡುರಾಗಿ ಹುಲ್ಲು

 ದನಕರುಗಳಿಗೆ ಮೇವಾಗಿ ಬಳಕೆಯಾಗುವ ಹುಲ್ಲುಗಳಲ್ಲಿ ಬಹಳ ಪ್ರಸಿದ್ಧವಾದುದು. ಇದು ಗ್ರಾಮಿನೀ (ಪೋಯೇಸೀ) ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕನಾಮ ಡ್ಯಾಕ್ಟ್ರಿಲೊಕ್ಟೀನಿಯಮ್ ಈಜಿಪ್ಟಿಕಮ್. ಎಲ್ಯುಸೈನೀ ಈಜಿಪ್ಟಿಕಮ್ ಎಂಬುದು ಇದರ ಪರ್ಯಾಯನಾಮ, ಉಷ್ಣ ಹಾಗೂ ಸಮಶೀತೋಷ್ಣವಲಯಗಳ ಬಯಲು ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ದಕ್ಷಿಣ ಆಫ್ರಿಕದಲ್ಲಿ ದನಗಳ ಮೇವಿಗೆಂದೇ ಇದನ್ನು ಹುಲ್ಲುಗಾವಲುಗಳಲ್ಲಿ ಬೆಳೆಸುವುದುಂಟು. ಸುಮಾರು 45 ಸೆಂಮೀ. ಎತ್ತರಕ್ಕೆ ಬೆಳೆಯುವ ವಾರ್ಷಿಕ ಅಥವಾ ಬಹು ವಾರ್ಷಿಕ ಗಿಡ ಇದು. ಇತರ ಹುಲ್ಲುಗಳಲ್ಲಿರುವಂತೆಯೆ ಇದರಲ್ಲೂ ತೊಡಕು ಬೇರೂ ಸರಳವಾದ ಉದ್ದನೆಯ ಪಟ್ಟಿಯಂಥ ಎಲೆಗಳೂ ಇವೆ. ಹೂಗೊಂಚಲು ಬಹುವಾಗಿ ಕವಲೊಡೆದ ಅಂಬೆಲ್ ಮಾದರಿಯದು. 1 1/2"-3" ಉದ್ದವಿದೆ.

 ಹೆಚ್ಚಾಗಿ ಇದು ಮೇವಾಗಿ ಉಪಯೋಗವಾಗುವುದಾದರೂ ಭಾರತ ಮತ್ತು ಆಫ್ರಿಕಗಳಲ್ಲಿ ಬರಗಾಲದ ಸಂದರ್ಭದಲ್ಲಿ ಇದರ ಕಾಳುಗಳನ್ನು ಆಹಾರವಾಗಿ ಬಳಸುವುದುಂಟು. ಇದರ ವಾಸನೆ ಅಷ್ಟು ಮಧುರವಾಗಿಲ್ಲದಿದ್ದರೂ ತಿನ್ನಲು ರುಚಿಯಾಗಿದೆ. ಕಾಡುರಾಗಿ ಹುಲ್ಲಿಗೆ ಔಷಧೀಯ ಬೇಡಿಕೆಯೂ ಇದೆ. ಆಫ್ರಿಕದಲ್ಲಿ ಮೂತ್ರಪಿಂಡದ ರೋಗಗಳಿಗೆ ಇದನ್ನು ಔಷಧಿಯಾಗಿ ಉಪಯೋಗಿಸುತ್ತಾರೆ.

(ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ